ಬಿಜೆಪಿಯ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ದೋಸೆ ತಿನ್ನೋ ಫೋಟೋಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಭಾರೀ ವೈರಲ್ ಆಗಿತ್ತು. ಈಗ ಕಾಂಗ್ರೆಸ್ ವಿರುದ್ಧ ಬಿಜೆಪಿ ತಿರುಗೇಟು ನೀಡಿದೆ. ಹೌದು, ದೋಸೆ ಟ್ವೀಟ್ ಗೆ ಮತ್ತೊಂದು ಕೌಂಟರ್ ಟ್ವೀಟ್ ಬಿಜೆಪಿ ನೀಡಿದೆ. ಕರ್ನಾಟಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಮುಂದುವರೆದಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಓಣಂ ಊಟ ಸವಿದು ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ಮುಂದಿಟ್ಟುಕೊಂಡು ಬಿಜೆಪಿ ಶುಕ್ರವಾರ ಟ್ವೀಟ್ ಮಾಡಿದೆ.
‘ಕಾಂಗ್ರೆಸ್ಸಿಗರೇ, ನಮಗೂ ನಿಮ್ಮ ಹಾಗೆಯೇ, ಜನರು ಸಂಕಷ್ಟದಲ್ಲಿರುವಾಗ ಜವಾಬ್ದಾರಿಯುತ ವಿಪಕ್ಷದ ರಾಜ್ಯ ಅಧ್ಯಕ್ಷನಾಗಿ ಬೆಂಗಳೂರಿನಲ್ಲೇ ಇರಬೇಕಾಗಿತ್ತು. ಆದರೆ ಭಾರತ್ ಜೋಡೋ ಯಾತ್ರೆ, ಹಬ್ಬದೂಟದಲ್ಲಿ ತೊಡಗಿಕೊಂಡಿದ್ದಾರೆ, ಎಂತಹ ಅಪ್ರಬುದ್ಧ ಕೆಪಿಸಿಸಿ ಅಧ್ಯಕ್ಷ ಎನ್ನಬಹುದು. ಆದರೆ ನಾವು ಆ ಕೆಲಸ ಮಾಡುವುದಿಲ್ಲ’ ಎಂದು ಬಿಜೆಪಿ ಟ್ವಿಟ್‌ನಲ್ಲಿ ಹೇಳಿದೆ.
ಇದಕ್ಕೂ ಮೊದಲು ತೇಜಸ್ವಿ ಸೂರ್ಯ ಅವರ ಒಂದು ಫೋಟೋಗೆ ಕಾಂಗ್ರೆಸ್ ಈ ರೀತಿ ಟ್ವೀಟ್ ಮಾಡಿತ್ತು. ‘ಬೆಂಗಳೂರು ಮುಳುಗಿದೆ, ಜನತೆ ಪರದಾಡುತ್ತಿದ್ದಾರೆ, ಆದರೆ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯಗೆ ದೋಸೆ ತಿನ್ನುವ ಟೆಂಪ್ಟ್ ಆಗಿದ್ಯಂತೆ. ಮಕ್ಕಳಾಟ ಆಡಿಕೊಂಡಿದ್ದ ಅಪ್ರಬುದ್ಧರನ್ನು ಸಂಸದರನ್ನಾಗಿಸಿದರೆ ಇನ್ನೇನು ನಿರೀಕ್ಷಿಸಲು ಸಾಧ್ಯ?’ ಎಂದು ಪ್ರಶ್ನೆ ಮಾಡಿತ್ತು.
ಗುರುವಾರ ಡಿ. ಕೆ. ಶಿವಕುಮಾರ್ ಓಣಂ ಊಟ ಸವಿದಿದ್ದರು. ಈ ಕುರಿತ ಫೋಟೋ ಹಾಕಿ, ‘ಕೇರಳದ ಸಂಸ್ಕೃತಿ, ವೈಭವದ ಪ್ರತೀಕವೇ ಓಣಂ, ಈ ಶುಭ ಸಂದರ್ಭದಲ್ಲಿ ಓಣಂ ಸಧ್ಯ (ಓಣಂ ಹಬ್ಬದೂಟ) ಸವಿಯುವ ಅವಕಾಶ ಒದಗಿ ಬಂತು’ ಎಂದು ಬರೆದಿದ್ದರು.
