Gruha lakshmi scheme: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಮನೆಯ ಯಜಮಾನತಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ‘ಗೃಹ ಲಕ್ಷ್ಮಿ ಯೋಜನೆ’ಗೆ (Gruha lakshmi scheme) ಈಗಾಗಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಾಲನೆ ನೀಡಲಾಗಿತ್ತು. ಈ ಹಿನ್ನೆಲೆ ಇದೀಗ ರಾಜ್ಯ ಸರ್ಕಾರ ‘ಗೃಹ ಲಕ್ಷ್ಮಿ ಯೋಜನೆ’ಯಡಿ ನಾಡದೇವತೆ ಚಾಮುಂಡೇಶ್ವರಿ ದೇವಿಗೂ ಪ್ರತಿ ತಿಂಗಳು 2 ಸಾವಿರ ರೂ. ನೀಡಲು ನಿರ್ಧರಿಸಿದೆ.
ಕಾಂಗ್ರೆಸ್‍ನ ಎಂಎಲ್ಸಿ ಮತ್ತು ಪಕ್ಷದ ರಾಜ್ಯ ಮಾಧ್ಯಮ ಘಟಕದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಪ್ರತಿ ತಿಂಗಳು ‘ಗೃಹ ಲಕ್ಷ್ಮಿ ಯೋಜನೆ’ಯ ಹಣ ನೀಡುವಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು.
ಇದೀಗ MLC ದಿನೇಶ್ ಗೂಳಿಗೌಡರ ಪತ್ರಕ್ಕೆ ತಕ್ಷಣವೇ ಸ್ಪಂದಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, ಪ್ರತಿ ತಿಂಗಳು ನಾಡದೇವತೆ ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ 2 ಸಾವಿರ ರೂ. ಅರ್ಪಿಸಲು ಕ್ರಮ ವಹಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಗೂಳಿಗೌಡ, ‘ನಾಡದೇವತೆ ಚಾಮುಂಡೇಶ್ವರಿ ದೇವಿಗೆ ‘ಗೃಹ ಲಕ್ಷ್ಮಿ ಯೋಜನೆ’ಯಡಿ 2 ಸಾವಿರ ರೂ. ನೀಡುವ ಪ್ರಸ್ತಾವನೆಗೆ ಡಿಸಿಎಂ ಒಪ್ಪಿಗೆ ಸೂಚಿಸಿದ್ದು, ಪ್ರತಿ ತಿಂಗಳು ದೇವಸ್ಥಾನದ ಖಾತೆಗೆ ನೇರವಾಗಿ ಹಣ ಜಮಾ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸೂಚಿಸಿದ್ದಾರೆ’ ಎಂದು ತಿಳಿಸಿದ್ದಾರೆ. ಸದ್ಯ ಕಾಂಗ್ರೆಸ್ ಸರ್ಕಾರದ ಹರಕೆಯ ಭಾಗವಾಗಿ ಚಾಮುಂಡೇಶ್ವರಿ ದೇವಸ್ಥಾನದ ಖಾತೆಗೆ 2,000 ರೂ. ಹಣ ಠೇವಣಿ ಮಾಡಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: Hair Care: ಬಿಳಿ ಕೂದಲಿನ ಚಿಂತೆ ಬಿಡಿ : ಈ ಎರಡು ವಸ್ತು 5 ನಿಮಿಷದಲ್ಲಿ ನಿಮ್ಮ ಕೂದಲನ್ನು ಕಪ್ಪಾಗಿಸುತ್ತೆ !
