Bengaluru : ಪ್ರೀತಿಯ ಹೆಸರಲ್ಲಿ ಯುವತಿಗೆ ಲವ್, ಸೆಕ್ಸ್, ದೋಖಾ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶುಭಾಂಶು ಶುಕ್ಲ (27) ಎಂಬಾತ ಪ್ರೀತಿಯ (Love) ಹೆಸರಿನಲ್ಲಿ ಯುವತಿಗೆ ಲೈಂಗಿಕ, ಮಾನಸಿಕ ಹಾಗೂ ಆರ್ಥಿಕ ದೌರ್ಜನ್ಯ (Economic Threat) ಎಸಗಿದ್ದಾನೆ. ಕೊನೆಗೆ ಮೋಸ ಮಾಡಿದ ಆರೋಪಿಯೊಬ್ಬನನ್ನು ಬಾಗಲಗುಂಟೆ ಪೊಲೀಸ್ ಠಾಣೆ (Police Station) ಪೊಲೀಸರು ಬಂಧಿಸಿದ್ದಾರೆ.
ಶುಭಾಂಶು ಶುಕ್ಲ ಮೊದಲು ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ. ಈ ವೇಳೆ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿಯ ಮೂಲಕ ಮನೆಯವರ ಪರಿಚಯ ಮಾಡಿಕೊಂಡಿದ್ದ ಶುಭಾಂಶು ಶುಕ್ಲ ನಂತರ ಬಾಲಕಿಯ ಸಹೋದರಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿದ್ದಾನೆ.
75 ಲಕ್ಷ ದೋಖಾ!
ಪ್ರೀತಿ ಹೆಸರಿನಲ್ಲಿ ಯುವತಿಯ ನಂಬಿಕೆಯನ್ನು ಸಂಪೂರ್ಣವಾಗಿ ಗೆದ್ದ ಶುಭಾಂಶು, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಲಿವಿಂಗ್ ರಿಲೇಷನ್‌ಶಿಪ್‌ಗೆ ಮುಂದಾಗಿದ್ದಾನೆ. ಪೋಷಕರಿಗೆ ಕೆಲಸದ ನಿಮಿತ್ತ ಮುಂಬೈಗೆ ತೆರಳುತ್ತಿರುವುದಾಗಿ ಸುಳ್ಳು ಹೇಳಿ, ಬೆಂಗಳೂರಿನ ಖಾಸಗಿ ಫ್ಲಾಟ್‌ನಲ್ಲಿ ಯುವತಿಯೊಂದಿಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಈ ಅವಧಿಯಲ್ಲಿ ಹಂತ ಹಂತವಾಗಿ ಯುವತಿಯ ಬಳಿ ಸುಮಾರು 75 ಲಕ್ಷ ರೂಪಾಯಿ ಹಣವನ್ನು ವಿವಿಧ ಕಾರಣಗಳನ್ನು ನೀಡಿ ಪಡೆದುಕೊಂಡಿದ್ದಾನೆ. ವ್ಯವಹಾರ, ಉದ್ಯೋಗ, ಕುಟುಂಬ ಸಮಸ್ಯೆ, ಭವಿಷ್ಯದ ಯೋಜನೆಗಳು ಎಂದು ಹೇಳಿ ಹಣ ಪಡೆದಿದ್ದ ಶುಭಾಂಶು, ನಂತರ ಆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇನ್ನು ಸಂತ್ರಸ್ತೆಯ ಪರಿಚಯಕ್ಕೆ ಮೂಲ ಕಾರಣವಾಗಿದ್ದ ಆಕೆಯ ಅಪ್ರಾಪ್ತ ಸಹೋದರಿಯ ಮೇಲೂ ಶುಭಾಂಶು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಗ್ರೂಪ್ ಸ್ಟಡಿ ಮಾಡಲು ತೆರಳುತ್ತಿದ್ದಾಗ ಪರಿಚಯವಾಗಿದ್ದ ಶುಭಾಂಶು, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಾನು ಕರೆದಾಗೆಲ್ಲ ಬರಬೇಕು ಎಂದು ಬೆದರಿಸಿದ್ದ ಆತ, ನಿನ್ನ ಮನೆಯವರನ್ನು ನನಗೆ ಪರಿಚಯ ಮಾಡಿಸು ಎಂದಿದ್ದ. ಹಾಗಾದರೆ ಮಾತ್ರ ತಾನು ನಿನ್ನ ಬಿಡೋದಾಗಿ ಹೆದರಿಸಿದ್ದ ಎಂದು ಅಪ್ರಾಪ್ತೆಯೂ ದೂರಿದ್ದಾಳೆ.
