Bangalore-Mangalore Train: ಬೆಂಗಳೂರಿನಲ್ಲಿ ವಾಸವಿರುವ ಕರಾವಳಿ ಭಾಗದ ಜನರಿಗೆ ರೈಲು ಸಂಚಾರ ಅತಿ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ. ರೈಲು ಸೇವೆಯ ಬೇಡಿಕೆ ಪ್ರಕಾರ, ವಾರದಲ್ಲಿ ಆರು ದಿನ ಸಂಚರಿಸುವ ರೈಲಿನಲ್ಲಿ ಆಸನ ಸಿಗುವುದಿಲ್ಲ. ಭರ್ತಿಯಾಗಿ ಹೋಗುತ್ತಿದೆ ಎಂಬ ದೂರು ಇತ್ತು. ಅಲ್ಲದೆ, ಈ ರೈಲನ್ನು ಕಾರವಾರವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಇತ್ತು, ಇದೀಗ ಜನರ ಬೇಡಿಕೆ ಈಡೇರಿದೆ.
ಹೌದು, ಇದೀಗ ಭಾರತೀಯ ರೈಲ್ವೆ ಬೆಂಗಳೂರು ಮತ್ತು ಕರಾವಳಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಿದೆ. ಬೆಂಗಳೂರು-ಮೈಸೂರು- ಮಂಗಳೂರು ನಡುವೆ ವಾರದಲ್ಲಿ ಆರು ದಿನ ಸಂಚರಿಸುವ 16585 ಸಂಖ್ಯೆಯ ರೈಲು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರವರೆಗೆ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಆದೇಶ ನೀಡಿದೆ. ಈ ರೈಲು ಪ್ರತಿದಿನವೂ ಸಂಚರಿಸಲು ಅನುಮತಿ ನೀಡಲಾಗಿದೆ.
ಆದರೆ ಬೆಂಗಳೂರಿನಿಂದ ಮಂಗಳೂರು (Bangalore-Mangalore Train) ವರೆಗಿನ ಸಂಚಾರ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದಲ್ಲದೆ ಇನ್ನುಮುಂದೆ ಮಂಗಳೂರಿನಿಂದಲೇ ಬೆಂಗಳೂರಿಗೆ ಮರಳುತ್ತಿದ್ದ ರೈಲು ಇನ್ನು ಮುಂದೆ ಕರಾವಳಿಯ ವಿವಿಧ ಪಟ್ಟಣಗಳ ಮಾರ್ಗವಾಗಿ ಸಂಚರಿಸಿ ಮುರುಡೇಶ್ವರವರೆಗೆ ಬಂದು ಹೋಗಲಿದೆ.
ಮಧಾಹ್ನ 1.20ಕ್ಕೆ ಮುರುಡೇಶ್ವರಕ್ಕೆ ರೈಲು ಆಗಮನ:
ಈ ಹಿಂದಿನ ನಿಯಮದಂತೆ 16585 ಸಂಖ್ಯೆಯ ರೈಲು ರಾತ್ರಿ 8.15ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿಯಿಂದ ಹೊರಡಲಿದೆ. ಅಲ್ಲಿಂದ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ಜಂಕ್ಷನ್, ಮೈಸೂರು ಮಾರ್ಗವಾಗಿ ಮಾರನೇ ದಿನ ಬೆಳಗ್ಗೆ 8.30ಕ್ಕೆ ಮಂಗಳೂರು ತಲುಪಲಿದೆ. ಇನ್ನು ಮುಂದೆ ಸಾಗಿ ಮಧ್ಯಾಹ್ನ 1.20ಕ್ಕೆ ಮುರುಡೇಶ್ವರ ರೈಲ್ವೆ ನಿಲ್ದಾಣ ಬಂದು ತಲುಪಲಿದೆ.
ಮಧಾಹ್ನ 1.55ಕ್ಕೆ ಬೆಂಗಳೂರಿನತ್ತ:
ಪುನಃ 16585 ಸಂಖ್ಯೆಯ ರೈಲು ಮುರುಡೇಶ್ವರದಿಂದ ಮಧ್ಯಾಹ್ನ 1.55ಕ್ಕೆ ಹೊರಡಲಿದ್ದು, ಸಂಜೆ 6.30ಕ್ಕೆ ಮಂಗಳೂರು ತಲುಪಲಿದೆ. ಅಲ್ಲಿಂದ ಹೊರಟು ಮಾರನೇ ದಿನ ಮುಂಜಾನೆ 3 ಗಂಟೆಗೆ ಮೈಸೂರು ತಲುಪಲಿದೆ. ಬೆಳಗ್ಗೆ 7.15ಕ್ಕೆ ಬೆಂಗಳೂರು ಸೇರಲಿದೆ.
ಮುಖ್ಯವಾಗಿ ಮಂಗಳೂರಿನಿಂದ ಮುರುಡೇಶ್ವರದ ಮಾರ್ಗದ ಮಧ್ಯೆ ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕುರ, ಕುಂದಾಪುರ, ಬೈಂದೂರು, ಭಟ್ಕಳದಲ್ಲಿ ಈ ರೈಲು ನಿಲುಗಡೆ ಆಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಹೊಸ ನಿಯಮ ಶೀಘ್ರದಲ್ಲಿಯೇ ಜಾರಿಯಾಗಲಿದೆ.
