ಬೆಂಗಳೂರು: ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪ್ರಸ್ತುತ ದಿವ್ಯಾರನ್ನು ಪುಣೆಯಿಂದ ಕಲಬುರಗಿಗೆ ಕರೆತರಲಾಗುತ್ತಿದೆ. 10 ಗಂಟೆಗೆ ಅವರು ಕಲಬುರಗಿ ತಲುಪಬಹುದು ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ. ಕಲಬುರಗಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಜ್ಞಾನಜ್ಯೋತಿ ಶಾಲೆಯಲ್ಲಿ ಅಕ್ರಮ ನಡೆದಿತ್ತು ಎಂದು ತನಿಖೆ ವೇಳೆ ತಿಳಿದುಬಂದಿತ್ತು. ಸಿಐಡಿ ಎಸ್ಎಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ದಿವ್ಯಾ ಹಾಗರಗಿ ಅವರನ್ನು ವಶಕ್ಕೆ ಪಡೆದುಕೊಂಡಿದೆ.
ಕಲಬುರಗಿ ಕ್ಷೇತ್ರದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಒಡೆತನದ ಜ್ಞಾನಜ್ಯೋತಿ ಕಾಲೇಜಿನಲ್ಲಿ ಪಿಎಸ್‌ಐ ನೇಮಕಾತಿಯ ಪರೀಕ್ಷೆ ವೇಳೆ ಅಕ್ರಮ ನಡೆದಿರುವುದು ಪ್ರಾಥಮಿಕ ತನಿಖೆ ವೇಳೆ ಸಾಬೀತಾಗಿದೆ. ಆದರೆ ಈ ವಿಚಾರ ಹೊರಬರುತ್ತಿದ್ದಂತೆ ದಿವ್ಯಾ ಹಾಗರಗಿ ತಲೆಮರೆಸಿಕೊಂಡಿದ್ದರು.
ಪ್ರಕರಣದ ಹಿನ್ನೆಲೆ : 2020ರಲ್ಲಿ ರಾಜ್ಯಾದಂತ ನಡೆದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆಗೆ ಹೆಚ್ಚಿನ ಪಾಲು ಸಿಕ್ಕಿತ್ತು. 545 ಹುದ್ದೆಗಳ ಪೈಕಿ ಕಲಬುರಗಿ ಜಿಲ್ಲೆಯಿಂದಲೇ ಸುಮಾರು 92 ಅಭ್ಯರ್ಥಿಗಳು ಪಿಎಸ್‌ಐ ಆಗಿ ಆಯ್ಕೆ ಆಗಿದ್ದರು. ಕಲಬುರಗಿ ಜಿಲ್ಲೆಯ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪೈಕಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆ ಬರೆದ 11 ಅಭ್ಯರ್ಥಿಗಳು ಪಾಸ್ ಆಗಿದ್ದರು. ಇವರೆಲ್ಲರೂ ಅಕ್ರಮವಾಗಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ ಎಂಬ ಆರೋಪ ಎದುರಾಗಿದೆ.
ಅಕ್ರಮದ ಪ್ರಮುಖ ರೂವಾರಿ ಆರ್. ಡಿ. ಪಾಟೀಲ್ & ಟೀಂ, ಪರೀಕ್ಷೆ ವೇಳೆ ಅಭ್ಯರ್ಥಿಗಳಿಗೆ ಬ್ಲೂ ಟೂತ್ ಬಳಕೆ ಮಾಡಲು ಹೇಳುತ್ತಿದ್ದರು ಎಂದು ತಿಳಿದು ಬಂದಿದೆ. ಈಗಾಗಲೇ ಅಕ್ರಮವನ್ನು ಪತ್ತೆ ಮಾಡಿ ಆರ್. ಡಿ. ಪಾಟೀಲ್, ಮಹಾಂತೇಶ ಪಾಟೀಲ್ ಸೇರಿದಂತೆ ಹಲವರ ಬಂಧನ ಮಾಡಲಾಗಿದೆ. ಆರೋಪಿಗಳ ವಿಚಾರಣೆ ವೇಳೆ ಒಂದೊಂದೇ ಅಕ್ರಮಗಳು ಬಯಲಾಗುತ್ತಿವೆ. ಮ್ಯಾಕ್ರೋ ಬ್ಲೂ ಟೂತ್, ಮೈಕ್ರೋ ಡಿವೈಸ್ ಬಳಸಿ ಅಭ್ಯರ್ಥಿಗಳಿಗೆ ಉತ್ತರ ಹೇಳಲು ವ್ಯವಸ್ಥಿತ ತಂತ್ರ ರೂಪಿಸಿದ್ದರು ಎಂದು ವಿಚಾರಣೆ ವೇಳೆ ಬಹಿರಂಗವಾಗಿದೆ. ಪರೀಕ್ಷಾ ಅಕ್ರಮಕ್ಕೆ ಡಿವೈಸ್ ಎಕ್ಸ್ಪರ್ಟ್ ಟೀಂ ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ.
