Home » Bengaluru : ಏನ್ ಧೈರ್ಯ ಗುರು- ಜಡ್ಜ್ ಸೈನ್ ಕಾಪಿ ಮಾಡಿ, ಕೋಟ್ಯಂತರ ರೂ ಜಮೀನು ನುಂಗಿದ ಕಿಡಿಗೇಡಿಗಳು

Bengaluru : ಏನ್ ಧೈರ್ಯ ಗುರು- ಜಡ್ಜ್ ಸೈನ್ ಕಾಪಿ ಮಾಡಿ, ಕೋಟ್ಯಂತರ ರೂ ಜಮೀನು ನುಂಗಿದ ಕಿಡಿಗೇಡಿಗಳು

0 comments

Bengaluru : ನಮ್ಮ ದೇಶದಲ್ಲಿ ನ್ಯಾಯಾಧೀಶರ ಸ್ಥಾನಕ್ಕೆ ತನ್ನದೇ ಆದ ಮಹತ್ವ, ಗೌರವವಿದೆ. ಒಬ್ಬ ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಕೂಡ ನ್ಯಾಯಾಲಯ ಹಾಗೂ ನ್ಯಾಯಾಧೀಶರ ಮುಂದೆ ತಲೆಬಾಗಲೇಬೇಕು.  ಅವರ ಆಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಕೋರ್ಟ್ನಲ್ಲಿ ನಿಂತು ಕೆಲವೊಮ್ಮೆ ಜಡ್ಜ್ ಎದುರು ಮಾತನಾಡಲು ಕೂಡ ಭಯ ಬೀಳುತ್ತಾರೆ. ಇಂಥದರ ನಡುವೆ ಇಲ್ಲೊಂದೆಡೆ ಕೆಲವು ಕಿಡಿಗೇಡಿಗಳು ನ್ಯಾಯಾಧೀಶರ ಸಹಿಯನ್ನೇ ಕಾಪಿ ಮಾಡಿ ಕೋಟ್ಯಾಂತರ ರೂಪಾಯಿಯ ಜಮೀನನ್ನು ಸ್ವಾಹ ಮಾಡಿದ್ದಾರೆ.

ಹೌದು, ಉದ್ಯಾನ ನಗರಿ ಉದ್ಯಮದ ನಗರಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ದಿನೇ ದಿನೇ ಜಮೀನುಗಳಿಗೆ ಬಂಗಾರದ ಬೆಲೆ ಬರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಭೂಗಳ್ಳರು ಜಮೀನು ಕಬಳಿಸುವುದಕ್ಕೆ ಮುಂದಾಗ್ತಾರೆ. ಅದೇ ರೀತಿ ಆನೇಕಲ್ ತಾಲ್ಲೂಕಿನ ಚಿಂತಲಮಡಿವಾಳ ಗ್ರಾಮದ ಸರ್ವೆ ನಂಬರ್ 43/2 ರ 28.8 ಗುಂಟೆ ಜಮೀನಿನ ಪೈಕಿ 14 ಗುಂಟೆ ಜಾಗವನ್ನ ನಕಲಿ ಸಹಿ ಮತ್ತು ನಕಲಿ ದಾಖಲೆಗಳನ್ನ ಸೃಷ್ಟಿಸಿ ಕಬಳಿಕೆ ಮಾಡಿಕೊಂಡಿದ್ದಾರೆ.

ಮೃತ ವೆಂಕಟಸ್ವಾಮಿ ಎಂಬುವವವರ ಹೆಸರಿನಲ್ಲಿದ್ದ ಜಮೀನನ್ನ ಪತ್ನಿ ಜ್ಯೋತಮ್ಮರ ಹೆಸರಿಗೆ ಮಾಡಿಸಿ ಕೊಡುತ್ತೇವೆಂದು ನಂಬಿಸಿದ ಸಂಬಂಧಿ ಮುನಿರಾಜರಾಘವ ಅಲಿಯಾಸ್​ ಮುರಾರಿ ಮುನೇಶ್ವರ್ ರಾವ್ ಅ್ಯಂಡ್​ ಗ್ಯಾಂಗ್ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನ್ಯಾಯಾಧೀಶರ 3 ಸೈನ್, ಜೊತೆಗೆ ಜಮೀನು ಮಾಲೀಕ ಜ್ಯೋತಮ್ಮ, ಆಕೆಯ ಮಕ್ಕಳ ಒಟ್ಟು 16 ಸೈನ್​ಗಳನ್ನ ನಕಲು ಮಾಡಿ ಕೋರ್ಟ್ ಡಿಕ್ರಿ ಬಳಸಿ ಅತ್ತಿಬೆಲೆಯಲ್ಲಿ ರಿಜಿಸ್ಟರ್ ಮಾಡಿ ತದನಂತರ ಜಮೀಮಿನಿನ ಖಾತೆ ಮಾಡಿಸಿಕೊಂಡಿದ್ದಾರೆ. ಬಳಿಕ ಪಡುಗೋಲಸ ಶಿವಪ್ರಸಾದ್ ಎಂಬಾತನಿಕೆ ಜಮೀನು ಮಾರಾಟ ಮಾಡಲಾಗಿದೆ. ಅಲ್ಲದೆ ಜಮೀನಿನಲ್ಲಿದ್ದ ಜ್ಯೋತಮ್ಮ ಪತಿ ವೆಂಕಟಸ್ವಾಮಿ ಸೇರಿದಂತೆ ಪೂರ್ವಿಕರ ಸಮಾಧಿಗಳನ್ನ ಜೆಸಿಬಿಗಳ ಮೂಲಕ ಧ್ವಂಸ ಮಾಡಲಾಗಿದೆ. ಜಮೀನು ಕಬಳಿಸಲು ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ನ್ಯಾಯಾಂಗ ವಂಚನೆ ಎಸಗಲಾಗಿದೆ.

ಇನ್ನು ಈ ವಿಚಾರ ಜ್ಯೋತಮ್ಮ ಕುಟುಂಬಕ್ಕೆ ತಿಳಿದ ಕೂಡಲೇ ಆನೇಕಲ್ ಪೊಲೀಸ್ ಠಾಣೆಯಲ್ಲಿ ಮುನಿರಾಜ್ ರಾಘವ, ಆಂಜಿನಪ್ಪ, ಅರುಣಾಕ್ಷಿ, ಪವಿತ್ರ, ಪೂಜಶ್ರೀ, ಸುಶ್ಮಿತ ಈ ಆರು ಜನರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿ ಪತಿಯನ್ನ ಕಳೆದುಕೊಂಡಿದ್ದ ಮಹಿಳೆಯ ಅಮಾಯಕತನವನ್ನೇ ದುರಪಯೋಗ ಪಡಿಸಿಕೊಂಡ ಭೂಗಳ್ಳರು ಕೋಟ್ಯಂತರ ರೂ ಬೆಲೆಬಾಳುವ ಜಾಗವನ್ನ ಗುಳುಂ ಮಾಡಿದ್ದಾರೆ. ಜಮೀನು ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು, ವಂಚನೆ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಲಾಗಿದೆ.

You may also like