Tumakuru: ಅಯ್ಯಪ್ಪ ಸ್ವಾಮಿ ಮಾಲೆ(Ayyappa Mala) ಧರಿಸಿ ಬಂದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯ ಶಿಕ್ಷಕಿ ಮನೆಗೆ ಕಳುಹಿಸಿದ ಘಟನೆ ತುಮಕೂರು(Tumakuru) ಜಿಲ್ಲೆಯ ಮರಳೂರು ದಿಣ್ಣೆ ಸರ್ಕಾರಿ ಶಾಲೆಯಲ್ಲಿ ನಡೆದಿದೆ.ಆರನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಶಾಲೆಯಿಂದ ವಾಪಾಸ್ ಕಳುಹಿಸಲಾಗಿದೆ ಎಂದು ಪ್ರಭಾರಿ ಮುಖ್ಯ ಶಿಕ್ಷಕಿ ಭಾಗ್ಯ ವಿರುದ್ಧ ಆರೋಪ ಕೇಳಿಬಂದಿದೆ.
ಆರೋಪಗಳನ್ನು ತಳ್ಳಿಹಾಕಿರುವ ಮುಖ್ಯ ಶಿಕ್ಷಕಿ , ನಾನು ಯಾವುದೇ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಗೆ ಕಳುಹಿಸಿಲ್ಲ. ನಿಯಮಾನುಸಾರ ಮಾಲೆ ಧರಿಸಿ, ದೀಕ್ಷಾ ವಸ್ತ್ರದಲ್ಲೇ ಶಾಲೆಗೆ ಬರುವುದಕ್ಕೆ ಅವಕಾಶವಿಲ್ಲ ಎಂದು ಬಿಇಒ ನನಗೆ ತಿಳಿಸಿದ್ದಾರೆ. ಅದನ್ನೇ ಮಕ್ಕಳಿಗೆ ತಿಳಿವಳಿಕೆ ರೂಪದಲ್ಲಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.ಘಟನೆಯ ಬಗ್ಗೆ ತಿಳಿದ ಅಯ್ಯಪ್ಪ ದೀಕ್ಷೆ ಆಚರಿಸುತ್ತಿರುವ ಭಕ್ತರು, ಎಬಿವಿಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರೊಂದಿಗೆ ಶಾಲೆಗೆ ಆಗಮಿಸಿ ಆಡಳಿತ ಮಂಡಳಿಯ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಕ್ಕಳನ್ನು ನಾನು ಹೊರಹಾಕಿಲ್ಲವೆಂದ ಶಿಕ್ಷಕಿ, ಶಾಲೆಯಲ್ಲಿ ಮಧ್ಯಾಹ್ನ ಮೊಟ್ಟೆ ಬೇಯಿಸುವ ವ್ಯವಸ್ಥೆ ಇದೆ. ಜೊತೆಗೆ ಕೆಲವು ವಿದ್ಯಾರ್ಥಿನಿಯರು ಮುಟ್ಟಾಗಿರುವ ಸಾಧ್ಯತೆಯಿದ್ದು, ಮೈಲಿಗೆಯಾಗಬಾರದೆಂಬ ಕಾರಣಕ್ಕೇ ನಾನೇ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಿದ್ದೇನೆ. ಇದನ್ನು ಅವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಗೊಂದಲವಿದ್ದು, ಬಿಇಒ ಅವರ ಗಮನಕ್ಕೆ ತರಲಾಗುವುದು ಎಂದೂ ತಿಳಿಸಿದ್ದಾರೆ. ಆದರೆ ಮಕ್ಕಳ ಧಾರ್ಮಿಕ ಶ್ರದ್ಧೆಗೆ ಅಡ್ಡಿ ಪಡಿಸಲಾಗಿದೆ ಎಂದು ಆರೋಪಿಸಿ ಹಿಂದೂ ಹಿತ ರಕ್ಷಣಾ ವೇದಿಕೆ ಡಿಡಿಪಿಐ ಅವರಿಗೆ ದೂರು ಸಲ್ಲಿಸಿದೆ. ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಸೂಕ್ತ ತನಿಖೆ ನಡೆಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
